ತೊದಲ ನುಡಿ
ಮೊದಲೀಗೆ ಕೈಮುಗಿದು ತೊದಲೀನ ನುಡಿಗಳನು
ಹದಮಾಡಿ ಬಿತ್ತಿ ಬೆಳೆದೇನೊ | ನಾಲಿಗ್ಯಾಗ
ಸದರೀಲೆ ಕಾಯೊ ಖಾಸಗತ |
ಹಸನಾದ ಹಾಡುಗಳು ಕಸರಿಲ್ಲದೆ ಮೂಡ್ಯಾವ
ಕೆಸರಿಲ್ಲದ ಮನಸಿಂದ ಕೇಳಿರೊ | ಖಾಸಗತನ
ಹೆಸರಿಗೆ ದನಿಯ ಕೂಡಿಸಿರೊ |
ಹಾಡು ಹಾಡವರಿಲ್ಲ ಹಾಡು ಕೇಳವರಿಲ್ಲ
ಹಾಡೊಳು ಮುಳುಗಿ ನಿಂತವರಿಲ್ಲ| ಖಾಸಗತನೇ
ಹಾಡಿನ ಹಾಡು ತಿಳಕೋರೊ|
ಹಸನಾದ ಹಾಡಲ್ಲಿ ಹೊಸರಾಗ ಉಲಿತೈತಿ
ಕಸರಿಲ್ಲ ಒಂದೀಟು ಭಾವದಲಿ | ಖಾಸಗತನ
ಹೆಸರನ್ನ ಮತಮತ್ತ ನುಡಿತೈತಿ |
ಮುಚ್ಚಿಟ್ಟ ಭಾವಗಳು ಬಚ್ಚ ಬರಿ ಬಯಲಲ್ಲಿ
ಮೆಚ್ಚಿಗೆ ಹೂವಾಗಿ ಅರಳ್ಯಾವು | ಖಾಸಗತನ
ನಿಚ್ಚ ನಿಜರೂಪ ತಳೆದಾವು |
ನೂರಾರು ತ್ರಿಪದಿಗಳು ಸೂರಾಡ್ತ ಹೊರಬರಲು
ದಾರಿಯ ಕಾಯತಿದ್ವು ಭಾವದಲಿ | ಖಾಸಗತನ
ಸೂರಿಗೆ ತಾಳ ಹಾಕಿದವು |
ಸಾಲಚ್ಚಿ ಕುಣಿದಾಡ್ತ ಮೇಬಿದ್ದು ಜಿಗಿದಾಡ್ತ
ನಾಲಿಗೆ ಮ್ಯಾಲ ಮೂಡ್ಯಾವು | ಖಾಸಗತನ
ಲೀಲೆಯ ಮೆಚ್ಚಿ ಹಾಡ್ಯಾವು |
ಒಂದರ ಹಿಂದೊಂದು ಮುಂದಮುಂದ ಮತ್ತೊಂದು
ಬಂಧನ ಹರಿದು ನುಗ್ಗ್ಯಾವು | ಖಾಸಗತನ
ಚಂದದಿ ಹಾಡಿ ಹಿಗ್ಗ್ಯಾವು |
ಬಚ್ಚ ಬರಿ ಬಯಲಲ್ಲಿ ಹೊಚ್ಚ ಹೊಸ ಹಾಡುಟ್ಟಿ
ಹಚ್ಚ ಹಸುರಿನ ಚೈತನ್ಯ | ತುಂಬತೈತಿ
ಸ್ವಚ್ಛ ಮನಸಿಂದ ದನಿಗೂಡೊ |
ಬೇಲಿಯ ಹೂವಿನಾಗ ಕೋಲಿಯ ಬುಡಚ್ಯಾಗ
ನಾಲಿಗೆ ತುತ್ತ ತುದಿಮ್ಯಾಲಿನ | ಖಾಸಗತ
ಸಾಲು ಅಕ್ಷರದಿ ಮೂಡ್ಯಾಣ |
ಹುದುಗಿದ ಭಾವಗಳು ಪುದುಪುದು ಎದ್ದಬಂದು
ಹದವಾದ ಲಯದಲ್ಲಿ ಮೂಡ್ಯಾವು | ಖಾಸಗತನ
ಪದವಾಗಿ ಹಾಡಲ್ಲಿ ಅರಳ್ಯಾವು |
ಏಳೇಏಳು ದಿನದಲ್ಲಿ ತಾಳಲಾರದ ಚಿಗುರೊಡೆದು
ಕಾಳುತುಂಬಿ ತೆನೆಕಟ್ಟಿ ತೂಗ್ಯಾವು | ಖಾಸಗತನ
ಬಾಳಿನ ಚರಿತೆಂii ಹಾಡ್ಯಾವು |
No comments:
Post a Comment