Friday, October 25, 2013

ಆಟ - ಹುಡುಗಾಟ

ಆಟ - ಹುಡುಗಾಟ

ಆಡುವ ಆಟದಲಿ ಮಾಡುವ ಮಾಟದಲಿ
ನೋಡುವ ನೋಟದಲಿ ನೀನಿರುವೆ | ಖಾಸಗತ
ಕೂಡುವ ಉಸಿರಿನ ಯೋಗದಲಿ |

ಓದಿನ ತತ್ವವ ಬೋಧೆ ಮಹತ್ವವ
ಬೀದಿಲಾಡುವ ಆಟದಲಿ | ತೋರುತ
ಶೋಧವ ಮಾಡಿದೆ ಮನಸನ್ನು |

ಸಾಲಿಯ ಕಲಿಯುತ ಗೋಲಿಯ ಆಡುತ್ತ
ಸೋಲದೆ ಗುರಿಯ ಮುಟ್ಟುತ್ತ | ಖಾಸಗತ
ಲೀಲೆಯ ತೋರಿದ ಗೆಳೆಯರಿಗೆ |

ಆಡುತ್ತ ಆಟವನು ಹಾಡುತ್ತ ಗೀತವನು
ನೋಡುತ್ತ ಅನುಭವ ಪಡೆದಾನೊ | ಖಾಸಗತ
ಮಡುವ ಮಾಟದಲಿ ಕಾಡ್ಯಾನು |

ಹಾದಿಯಲಿ ನಡೆತಂದು ಬೀದಿಯಲಿ ಓಡಾಡಿ
ಮೇದಿನಿ ತುಂಬೆಲ್ಲ ಆಡಿದನೊ | ಖಾಸಗತ
ಸಾಧನೆ ಮಾಡುತ ನಲಿದಾನೋ |

ಹುಡುಗಾಟ ಮಾಡಮಾಡ್ತ ಬುಡುಬುಡಿಕೆ ವೇಷವನು
ತಡಮಾಡ್ದ ತೊಟ್ಟು ಬಂದಾನೊ| ಓಣೋಣಿ
ಆಡಾಡ್ತ ಮಾಟ ಮಾಡ್ಯಾನೊ |

ಹಾವುಗಳ ಹಿಡಿತಂದು ಹಾವುಗಾರನಾಗ್ಯಾನೊ
ಜೀವಜೀವ ಮಾಡಿ ಸಲುವ್ಯಾನೊ |ಖಾಗತ
ನೋವಾಗದಂತೆ ಆಡಿಸ್ಯಾನೊ |

ಒಡೆದು ಬೆಡಗಿನ ಕೀಲ ನಡೆದು ತೋರಿದ ಲೀಲ
ಪಡೆದುತಾ ಯೋಗದ ಅರಿವನ್ನು | ಖಾಸಗತ
ನಡೆದಾಡಿ ತೋರಿದ ಜಗಕೆಲ್ಲ |

ಯೋಗದ ಗತಿಯನ್ನು ಭೋಗದ ಮಿತಿಯನ್ನು
ತ್ಯಾಗದ ಎತ್ತರ ನಿಲುವನ್ನು | ತಿಳಿದಾನೊ
ಯೋಗಿಯೇ ತಾನಾದೊ ಖಾಸಗತ |

ಒಂದಿನ ಹಬ್ಬದಾಗ ಮಂದೆಲ್ಲ ಕರೆಯಲು
ಅಂದದ ವೇಷವ ಧರಿಸ್ಯಾನೊ | ಖಾಸಗತ
ಚಂದಾಗಿ ನಮಾಜು ಮಾಡ್ಯಾನೊ |

ರಟಗಲ್ಲ ಶ್ರೀಗುರು ಮಠಕೆ ತಾ ಬಂದಾಗ
ಅಟಮಟ ಅತ್ತಿತ್ತ ತಿರಗ್ಯಾನೊ | ಅವರಿಗೆ
ದಿಟವಾದ ಲಿಂಗಪೂಜೆ ತೋರ್ಯಾನೊ |

ಒಡನಾಡಿ ಖಾಸಗತಗೆ ಬಿಡದೆ ಸೇವೆಯ ಮಾಡಿ
ಹಿಡಿದ ಗುರುವಿನ ಹಾದಿಯ | ದೇವೇಂದ್ರ
ಪಡೆದ ಅನುಭಾವ ಅವನಿಂದ |

ಪರವೂರ ಮಠಗಳ ಸಿರಿಸಂಪದವನ್ನು
ವರನೀಡಿ ಬಂದಾನೊ ಅವರಿಗೆ  | ಖಾಸಗತ
ಶರಣರ ತತ್ವವ ಸಾರ್ಯಾನೊ |

ಗುರುಬಸವ ಲಿಂಗನ ಕರುಣೆಯ ಶರಣ
ಗುರು ಇಂಗಳೇಶ್ವರ ಸಿದ್ಧಲಿಂಗ | ಖಾಸಗತಗೆ
ವರವಾಗಿ ದೊರೆತದ್ದು ಘನಭಾಗ್ಯ |

ಮೊಗಲಾಯ ನಾಡಿನ ಮಿಗಿಲಾದ ನಿಜಾಮ
ಮಗನಿಲ್ದೆ ಗೋಳು ಪಡತಿದ್ದ | ಖಾಸಗತನೆ

ಒಗತನಕ ಸಂತಾನ ನೀಡೆಂದ

ಏಸೊತ್ತ ನೆನೆಯಲಿ...

ಏಸೊತ್ತ ನೆನೆಯಲಿ...
ಖಾಸಗತ ನಿನನಾಮ ಏಸೊತ್ತ ನೆನೆಯಲಿ
ಸಾಸವತ ನನ್ನ ನಾಲ್ಗ್ಯಾಗ | ನೆಲದೈತಿ
ವಿಸ್ವಾಸದಿ ಕಾಯೊ ಅಭಿಮಾನ |

ಶರಣು ಬಂದೆನು ನಿನಗೆ ಹರನ ರೂಪದ ಗುರುವೆ
ಮರಣವಿಲ್ಲದ ಗತಿಗೆ ಕರೆದೊಯ್ಯೊ | ಖಾಸಗತ
ಕರುಣೆಯ ತೊರೋ ಕಡೆತನಕ

ಗುರುವೆ ಖಾಸಗತ ನಿನಗೆ ಶರಣೆಂದು ಬಾಗಿರುವೆ
ಸೆರಗೊಡ್ಡಿ ಬೇಡುವೆ ಅನುದಿನ | ಖಾಸಗತ
ವರನೀಡಿ ನನ್ನ ಕಾಪಾಡೊ |

ಚಣಹೊತ್ತು ನೆನದರ ಅಣುಮಾತ್ರ ಪಾಪಿಲ್ಲ
ಅನುದಿನ ನೆನೆದು ಪಾರಾಗೊ | ಸೂತರವ
ಮನದಾಗ ತುಂಬೊ ಖಾಸಗತ |

ಸುರುವಿಗೆ ನಿನ್ನನಾಮ ಅರಿವಿಗೆ ನಿನ್ನನಾಮ
ಮರವಿಗೆ ಬಿದ್ದು ನಡೆವಾಗ | ಖಾಸಗತ
ವರವಾಯ್ತು ಜಗಕೆ ನಿನನಾಮ |

ಖಾಸಗತ ನಿನ್ನೆಸರು ಏಸೊತ್ತು ನೆನೆಯಲಿ
ತಾಸಿಗೊಮ್ಮೊಮ್ಮೆ ನೆನೆಯುವೆನೊ | ಖಾಸಗತ
ಹೇಸಿಗೆ ಬುದ್ಧಿ ಹೊರಹಾಕೊ |

ಮನೆಯಾಗ ನೆಲಸೀದಿ ಮನದಾಗ ಸುಳಿತೀದಿ
ಗುಣದಾಗ ರೂಪ ತಾಳತೀದಿ | ಅನುಭಾವ್ದ
ಕಣದಾಗ ರಾಶಿ ಮಾಡತೀದಿ |

ಹೆಸರಾಯ್ತು  ಖಾಸಗತ ಉಸಿರಾಯ್ತು ಸಾಸವತ
ಖುಷಿಯಾಯ್ತು ಜಗವು ನಿನ್ನಿಂದ | ಖಾಸಗತ
ಕೆಸರಾದ ಮನಸು ತಿಳಿಯಾಯ್ತು |

ಹೆಚ್ಚೇನು ಹೇಳಲಿ ನೆಚ್ಚೀನಿ ನಿನಪಾದ
ಹುಚ್ಚನ್ನು ಬಿಡಿಸಿ ಕಾಪಾಡು | ಖಾಸಗತ
ಕೆಚ್ಚನ್ನು ತುಂಬಿ ದಯಮಾಡೊ |

ಗುಟ್ಟೀನ ಮಾತಿದು ಗುಟ್ಟಾಗಿ ಹೇಳತೀನಿ
ಗಟ್ಟ್ಯಾಗಿ ನೆಲಸು ಮನದಾಗ | ಖಾಸಗತ
ಪಟ್ಟಾಗಿ ಕರುಣಿಸಿ ಕಾಪಾಡೊ |

ಕಲ್ಲು ಕಲ್ಲಿನ ಮ್ಯಾಲ ಹುಲ್ಲು ಗರಿಕೆಯ ಮ್ಯಾಲ
ಚಲ್ಲಾಡತೈತಿ ನಿನನಾಮ | ಖಾಸಗತ
ಸೊಲ್ಲು ಸೊಲ್ಲಿನಾಗ ಬೆರತೈತೊ |

ತಳಕೋಟಿ ಊರಿದು ಕಳಕೋತು ಕಳಂಕ
ಬೆಳಕ ಹಂಚಿತೊ ಜಗಕೆಲ್ಲ | ಖಾಸಗತ
ಹೊಳಪು ತಂದಿತೊ ನಾಡಿಗೆಲ್ಲ |


ಅನ್ನ ಕೊಟ್ಟವ ನೀನು ಚಿನ್ನ ಕೊಟ್ಟವ ನೀನು
ಬೆನ್ನ ಬಿದ್ದ ನನ್ನ ಕಾಪಾಡಿ | ಬದುಕಿಗೆ
ಬಣ್ಣಕೊಟ್ಟವನ  ಮರಿಲೆಂಗೊ |

ಶಂಭುಹರ ನೀನೆಂದು ನಂಬಿಹುದು ಜಗವೆಲ್ಲ
ಸಾಂಬಶಿವನಾಗಿ ಕಾಪಾಡೊ | ಖಾಸಗತ
ಹುಂಬರ ಮ್ಯಾಳ ಮರಿಲಾರದ |

ಅರಿಯುವ ತಿಳಿವನ್ನ ಮರೆಯುವ ಮಾತನ್ನ
ಪಿರುತಿಂದ ಉಣಿಸೊ ದಿನದಿನ | ಖಾಸಗತ
ಹರನಾಮ ಉಂಡು ಬೆಳೆವೇನೊ |

ಹಾಡಿನ ಒಡಲಾಗ ಮೂಡಿ ಬಯಲಾಗುತ
ಕೂಡಿಕೊಂಡಿರುವ ಬೆಡಗೇನು | ಖಾಸಗತ
ಜೋಡಾದ ಗುಟ್ಟು ಬಿಡಿಸೇಳು |

ಅರಿವಿನ ಖಾಸಗತ ಗುರುವಿನ ನೆನಿಬೇಕು
ಮರೆಯದ ಮಾತು ತಿಳಕೋರೊ | ಪದರಾಗ
ಬಿರಿಯಾಗಿ ಕಟ್ಟಿ ನಡಕೋರೊ |

ಮುತ್ತಿನ ಕಾಳುಗಳ ಬಿತ್ತುವೆ ನಾಲಿಗ್ಯಾಗ
ಉತ್ತುವೆ ಹದವಾದ ಕಾಲದಾಗ | ಖಾಸಗತ
ಒತ್ತರಿಸಿ ಬೆಳೆವಂತೆ ಕರುಣಿಸೊ |


ಕುಂಟಿ ಕೂರಿಗೆ ಸಾಲೊ ರಂಟಿ ರಾಗೋಲು ಮ್ಯಾಲೊ
ಬಂಟ ಬಸವನ ಹೆಗಲಮ್ಯಾಲೊ | ಕುಳಿತಿರುವ
ಬಂಟನು ನೀನೆ ಖಾಸಗತ |

ಕೂಲಿ ಕುಂಬಳಿ ಮಾಡಿ ಹಾಲು ಹಯನವ ಮಾಡಿ
ಕಾಲನ ಕಳವಳ ಗೆಲುವಂತೆ | ಖಾಸಗತ
ಲೋಲ ಶ್ರೀ ಗುರುವೆ ಕಾಪಾಡೊ |

ಅಂಗಳ ಹೊಡೆವಾಗ ಕಂಗಳು ತುಂಬ್ಯಾವು
ತಿಂಗಳ ಬೆಳಕು ಹೊಳೆದಾವು | ಖಾಸಗತ
ಲಿಂಗ ರೂಪವನು ನೆನೆದಾಗ |

ಕಮ್ಮಾರನ ತಿದಿಯಾಗ ಚಮ್ಮಾರನ ಡೊಣಿಯಾಗ
ಸೊಮ್ಮಿನ ಗುರುವೆ ನಿನಬಿಂಬ | ಖಾಸಗತ
ಸುಮ್ಮಾನದಿ ಕಾಯೊ ದುಡಿವವರ |

ಅಪ್ಪ ಖಾಸಗತ ಶಿವನೆ ತಪ್ಪಮನ್ನಿಸು ಪ್ರಭುವೆ
ಒಪ್ಪಿಸಿಕೊಳ್ಳೊ ಪಾದಕ್ಕ | ಶ್ರೀಗುರುವೆ
ತಪ್ಪದೆ ಬರುವೆ ನಿನ ಮಠಕೆ |

ಅಲ್ಲಿರುವೆ ಇಲ್ಲಿರುವೆ ಎಲ್ಲೆಲ್ಲು ನೀನಿರುವೆ
ಹುಲ್ಲಿನ ಚಿಗುರ ತುದಿಮ್ಯಾಗ | ಮುಲುಕಾಡಿ
ಕಲ್ಲೊಳಗು ಅಡಗಿ ಕುಳಿತಿವೆ  |


ಅಳ್ಳಿಯ ಮರದಾಗ ಕಳ್ಳಿಯ ಕಂಟ್ಯಾಗ
ಎಳ್ಳು ಹೂವಿನ ಎಸಳಾಗ | ಖಾಸಗತ
ಹೊಳ್ಳೊಳ್ಳಿ ನೋಡಿ ನಗತಾನೊ  |

ಚಂಡು ಹೂಹೂವಿನ ತೊಂಡತೊಂಡಲದಾಗ
ದುಂಡು ಮಲ್ಲಿಗೆ ಮುಗುಳಾಗ | ಹುದುಗಿದ
ಬಂಡನು ಉಣಿಸುವನೊ ಖಾಸಗತ

ಮುತ್ತೈದೆ ಮಗಳಾಗಿ ಮುತ್ತಿನಾರತಿ ಹಿಡಿದು
ಹೊತ್ತೇರು ಮುಂಚೆ ಬರುವೇನೊ | ಖಾಸಗತ
ತೊತ್ತಾಗಿಸಿಕೊಳ್ಳೊ ನನ ಮನಸ |

ರಟ್ಟಿಯು ಬಲಿಲಾರದ ನೆಟ್ಟಗೆ ಬೆಳಿಲಾರದ
ಹೊಟ್ಟಿ ತಿಪ್ಪಲಕ ದುಡಿವಂತ | ಮಕ್ಕಳನ
ಒಟ್ಟಾಗಿ ಸಲಹೊ ಖಾಸಗತ |

ಕೋಳಿಯ ಕೂಗನ್ನು ಕೇಳುತ ಮೇಲೆದ್ದು
ಏಳೇಳು ಬಾರಿ ನೆನೆಯುವೆನೊ | ಖಾಸಗತ
ಕಾಳಕತ್ತಲೆಯ ಹೊರದೂಡೊ |

ಖ್ಯಾತಿಯಲಿ ಖಾಸಗತ ಜ್ಯೋತಿಯಲಿ ಖಾಸಗತ
ಸೋತು  ಸೊರಗಿದ ಕಾಲಕ್ಕ | ಕೈಹಿಡಿದು
ಮಾತು ನಡೆಸೀದೊ ಮಾದೇವ |


ಅಕ್ಕರದ ಮಾತಿನ್ಯಾಗ ಸಕ್ಕರೆಯ ನುಡಿಯಾಗ
ನಕ್ಕವರನಗೆಯ ಬೆಳಕಾಗ | ಖಾಸಗತ
ಹೊಕ್ಕಾಡೊ ಬಗೆಯು ಬೆಡಗಾಯ್ತು |

ಆಸತ್ರೂ ನೀನಿರುವೆ ಬ್ಯಾಸತ್ರೂ ನೀನಿರುವೆ
ತ್ರಾಸಿನಲಿ ಸಿಕ್ಕು ಹೊರಳಾಗೊ | ಖಾಸಗತ
ಲೇಸಾದ ಅರಿವು ನೀಡ್ಯಾನೊ |

ಮುಂಜಾನೆ ನೆನೆದರ ಅಂಜಿಕೆ ಹರಿವೂದು
ಸಂಜೀಕೆ ಧ್ಯಾನ ಮಾಡಿದರ | ಬದುಕಿನ
ನಂಜೆಲ್ಲ ಕರಗಿ ಹೋಗುವುದೊ |

ಹೂವಿನ ಬಕುತಿಗೆ ನೋವೆಲ್ಲ ದೂರಾಯಿತೊ
ಹಾವಿನ ನಂಜು ಹರಿದೋಯಿತೊ | ಖಾಸಗತ
ಸಾವಿನಂಜಿಕೆ ದೂರಾಯಿತೊ |

ಬೇವಿನ ಹಣ್ಣೀಗೂ ಮಾವಿನ ಪರಿಮಳ
ದೇವ ನಿನ್ನೆಸರು ನೆನೆದರ | ಖಾಸಗತ
ಸಾವಿಗೆ ಸದರ ಕಟ್ಟತೈತೊ |

ತೊದಲ ನುಡಿ

ತೊದಲ ನುಡಿ
ಮೊದಲೀಗೆ ಕೈಮುಗಿದು ತೊದಲೀನ ನುಡಿಗಳನು
ಹದಮಾಡಿ ಬಿತ್ತಿ ಬೆಳೆದೇನೊ | ನಾಲಿಗ್ಯಾಗ
ಸದರೀಲೆ ಕಾಯೊ ಖಾಸಗತ |

ಹಸನಾದ ಹಾಡುಗಳು ಕಸರಿಲ್ಲದೆ ಮೂಡ್ಯಾವ 
ಕೆಸರಿಲ್ಲದ ಮನಸಿಂದ ಕೇಳಿರೊ | ಖಾಸಗತನ
ಹೆಸರಿಗೆ ದನಿಯ ಕೂಡಿಸಿರೊ |

ಹಾಡು ಹಾಡವರಿಲ್ಲ ಹಾಡು ಕೇಳವರಿಲ್ಲ
ಹಾಡೊಳು ಮುಳುಗಿ ನಿಂತವರಿಲ್ಲ| ಖಾಸಗತನೇ
ಹಾಡಿನ ಹಾಡು ತಿಳಕೋರೊ|

ಹಸನಾದ ಹಾಡಲ್ಲಿ ಹೊಸರಾಗ ಉಲಿತೈತಿ
ಕಸರಿಲ್ಲ ಒಂದೀಟು ಭಾವದಲಿ | ಖಾಸಗತನ
ಹೆಸರನ್ನ ಮತಮತ್ತ ನುಡಿತೈತಿ |

ಮುಚ್ಚಿಟ್ಟ ಭಾವಗಳು ಬಚ್ಚ ಬರಿ ಬಯಲಲ್ಲಿ
ಮೆಚ್ಚಿಗೆ ಹೂವಾಗಿ ಅರಳ್ಯಾವು | ಖಾಸಗತನ
ನಿಚ್ಚ ನಿಜರೂಪ ತಳೆದಾವು |

ನೂರಾರು ತ್ರಿಪದಿಗಳು ಸೂರಾಡ್ತ ಹೊರಬರಲು
ದಾರಿಯ ಕಾಯತಿದ್ವು ಭಾವದಲಿ | ಖಾಸಗತನ
ಸೂರಿಗೆ ತಾಳ ಹಾಕಿದವು |

ಸಾಲಚ್ಚಿ ಕುಣಿದಾಡ್ತ ಮೇಬಿದ್ದು ಜಿಗಿದಾಡ್ತ
ನಾಲಿಗೆ ಮ್ಯಾಲ ಮೂಡ್ಯಾವು | ಖಾಸಗತನ
ಲೀಲೆಯ ಮೆಚ್ಚಿ ಹಾಡ್ಯಾವು |

ಒಂದರ ಹಿಂದೊಂದು ಮುಂದಮುಂದ ಮತ್ತೊಂದು
ಬಂಧನ ಹರಿದು ನುಗ್ಗ್ಯಾವು | ಖಾಸಗತನ
ಚಂದದಿ ಹಾಡಿ ಹಿಗ್ಗ್ಯಾವು |

ಬಚ್ಚ ಬರಿ ಬಯಲಲ್ಲಿ ಹೊಚ್ಚ ಹೊಸ ಹಾಡುಟ್ಟಿ
ಹಚ್ಚ ಹಸುರಿನ ಚೈತನ್ಯ | ತುಂಬತೈತಿ
ಸ್ವಚ್ಛ ಮನಸಿಂದ ದನಿಗೂಡೊ |

ಬೇಲಿಯ ಹೂವಿನಾಗ ಕೋಲಿಯ ಬುಡಚ್ಯಾಗ
ನಾಲಿಗೆ ತುತ್ತ ತುದಿಮ್ಯಾಲಿನ | ಖಾಸಗತ
ಸಾಲು ಅಕ್ಷರದಿ ಮೂಡ್ಯಾಣ |

ಹುದುಗಿದ ಭಾವಗಳು ಪುದುಪುದು ಎದ್ದಬಂದು
ಹದವಾದ ಲಯದಲ್ಲಿ ಮೂಡ್ಯಾವು | ಖಾಸಗತನ
ಪದವಾಗಿ ಹಾಡಲ್ಲಿ ಅರಳ್ಯಾವು |

ಏಳೇಏಳು ದಿನದಲ್ಲಿ ತಾಳಲಾರದ ಚಿಗುರೊಡೆದು
ಕಾಳುತುಂಬಿ ತೆನೆಕಟ್ಟಿ ತೂಗ್ಯಾವು | ಖಾಸಗತನ
ಬಾಳಿನ ಚರಿತೆಂii ಹಾಡ್ಯಾವು |