ಏಸೊತ್ತ ನೆನೆಯಲಿ...
ಖಾಸಗತ ನಿನನಾಮ ಏಸೊತ್ತ ನೆನೆಯಲಿ
ಸಾಸವತ ನನ್ನ ನಾಲ್ಗ್ಯಾಗ | ನೆಲದೈತಿ
ವಿಸ್ವಾಸದಿ ಕಾಯೊ ಅಭಿಮಾನ |
ಶರಣು ಬಂದೆನು ನಿನಗೆ ಹರನ ರೂಪದ ಗುರುವೆ
ಮರಣವಿಲ್ಲದ ಗತಿಗೆ ಕರೆದೊಯ್ಯೊ | ಖಾಸಗತ
ಕರುಣೆಯ ತೊರೋ ಕಡೆತನಕ
ಗುರುವೆ ಖಾಸಗತ ನಿನಗೆ ಶರಣೆಂದು ಬಾಗಿರುವೆ
ಸೆರಗೊಡ್ಡಿ ಬೇಡುವೆ ಅನುದಿನ | ಖಾಸಗತ
ವರನೀಡಿ ನನ್ನ ಕಾಪಾಡೊ |
ಚಣಹೊತ್ತು ನೆನದರ ಅಣುಮಾತ್ರ ಪಾಪಿಲ್ಲ
ಅನುದಿನ ನೆನೆದು ಪಾರಾಗೊ | ಸೂತರವ
ಮನದಾಗ ತುಂಬೊ ಖಾಸಗತ |
ಸುರುವಿಗೆ ನಿನ್ನನಾಮ ಅರಿವಿಗೆ ನಿನ್ನನಾಮ
ಮರವಿಗೆ ಬಿದ್ದು ನಡೆವಾಗ | ಖಾಸಗತ
ವರವಾಯ್ತು ಜಗಕೆ ನಿನನಾಮ |
ಖಾಸಗತ ನಿನ್ನೆಸರು ಏಸೊತ್ತು ನೆನೆಯಲಿ
ತಾಸಿಗೊಮ್ಮೊಮ್ಮೆ ನೆನೆಯುವೆನೊ | ಖಾಸಗತ
ಹೇಸಿಗೆ ಬುದ್ಧಿ ಹೊರಹಾಕೊ |
ಮನೆಯಾಗ ನೆಲಸೀದಿ ಮನದಾಗ ಸುಳಿತೀದಿ
ಗುಣದಾಗ ರೂಪ ತಾಳತೀದಿ | ಅನುಭಾವ್ದ
ಕಣದಾಗ ರಾಶಿ ಮಾಡತೀದಿ |
ಹೆಸರಾಯ್ತು ಖಾಸಗತ ಉಸಿರಾಯ್ತು ಸಾಸವತ
ಖುಷಿಯಾಯ್ತು ಜಗವು ನಿನ್ನಿಂದ | ಖಾಸಗತ
ಕೆಸರಾದ ಮನಸು ತಿಳಿಯಾಯ್ತು |
ಹೆಚ್ಚೇನು ಹೇಳಲಿ ನೆಚ್ಚೀನಿ ನಿನಪಾದ
ಹುಚ್ಚನ್ನು ಬಿಡಿಸಿ ಕಾಪಾಡು | ಖಾಸಗತ
ಕೆಚ್ಚನ್ನು ತುಂಬಿ ದಯಮಾಡೊ |
ಗುಟ್ಟೀನ ಮಾತಿದು ಗುಟ್ಟಾಗಿ ಹೇಳತೀನಿ
ಗಟ್ಟ್ಯಾಗಿ ನೆಲಸು ಮನದಾಗ | ಖಾಸಗತ
ಪಟ್ಟಾಗಿ ಕರುಣಿಸಿ ಕಾಪಾಡೊ |
ಕಲ್ಲು ಕಲ್ಲಿನ ಮ್ಯಾಲ ಹುಲ್ಲು ಗರಿಕೆಯ ಮ್ಯಾಲ
ಚಲ್ಲಾಡತೈತಿ ನಿನನಾಮ | ಖಾಸಗತ
ಸೊಲ್ಲು ಸೊಲ್ಲಿನಾಗ ಬೆರತೈತೊ |
ತಳಕೋಟಿ ಊರಿದು ಕಳಕೋತು ಕಳಂಕ
ಬೆಳಕ ಹಂಚಿತೊ ಜಗಕೆಲ್ಲ | ಖಾಸಗತ
ಹೊಳಪು ತಂದಿತೊ ನಾಡಿಗೆಲ್ಲ |
ಅನ್ನ ಕೊಟ್ಟವ ನೀನು ಚಿನ್ನ ಕೊಟ್ಟವ ನೀನು
ಬೆನ್ನ ಬಿದ್ದ ನನ್ನ ಕಾಪಾಡಿ | ಬದುಕಿಗೆ
ಬಣ್ಣಕೊಟ್ಟವನ ಮರಿಲೆಂಗೊ |
ಶಂಭುಹರ ನೀನೆಂದು ನಂಬಿಹುದು ಜಗವೆಲ್ಲ
ಸಾಂಬಶಿವನಾಗಿ ಕಾಪಾಡೊ | ಖಾಸಗತ
ಹುಂಬರ ಮ್ಯಾಳ ಮರಿಲಾರದ |
ಅರಿಯುವ ತಿಳಿವನ್ನ ಮರೆಯುವ ಮಾತನ್ನ
ಪಿರುತಿಂದ ಉಣಿಸೊ ದಿನದಿನ | ಖಾಸಗತ
ಹರನಾಮ ಉಂಡು ಬೆಳೆವೇನೊ |
ಹಾಡಿನ ಒಡಲಾಗ ಮೂಡಿ ಬಯಲಾಗುತ
ಕೂಡಿಕೊಂಡಿರುವ ಬೆಡಗೇನು | ಖಾಸಗತ
ಜೋಡಾದ ಗುಟ್ಟು ಬಿಡಿಸೇಳು |
ಅರಿವಿನ ಖಾಸಗತ ಗುರುವಿನ ನೆನಿಬೇಕು
ಮರೆಯದ ಮಾತು ತಿಳಕೋರೊ | ಪದರಾಗ
ಬಿರಿಯಾಗಿ ಕಟ್ಟಿ ನಡಕೋರೊ |
ಮುತ್ತಿನ ಕಾಳುಗಳ ಬಿತ್ತುವೆ ನಾಲಿಗ್ಯಾಗ
ಉತ್ತುವೆ ಹದವಾದ ಕಾಲದಾಗ | ಖಾಸಗತ
ಒತ್ತರಿಸಿ ಬೆಳೆವಂತೆ ಕರುಣಿಸೊ |
ಕುಂಟಿ ಕೂರಿಗೆ ಸಾಲೊ ರಂಟಿ ರಾಗೋಲು ಮ್ಯಾಲೊ
ಬಂಟ ಬಸವನ ಹೆಗಲಮ್ಯಾಲೊ | ಕುಳಿತಿರುವ
ಬಂಟನು ನೀನೆ ಖಾಸಗತ |
ಕೂಲಿ ಕುಂಬಳಿ ಮಾಡಿ ಹಾಲು ಹಯನವ ಮಾಡಿ
ಕಾಲನ ಕಳವಳ ಗೆಲುವಂತೆ | ಖಾಸಗತ
ಲೋಲ ಶ್ರೀ ಗುರುವೆ ಕಾಪಾಡೊ |
ಅಂಗಳ ಹೊಡೆವಾಗ ಕಂಗಳು ತುಂಬ್ಯಾವು
ತಿಂಗಳ ಬೆಳಕು ಹೊಳೆದಾವು | ಖಾಸಗತ
ಲಿಂಗ ರೂಪವನು ನೆನೆದಾಗ |
ಕಮ್ಮಾರನ ತಿದಿಯಾಗ ಚಮ್ಮಾರನ ಡೊಣಿಯಾಗ
ಸೊಮ್ಮಿನ ಗುರುವೆ ನಿನಬಿಂಬ | ಖಾಸಗತ
ಸುಮ್ಮಾನದಿ ಕಾಯೊ ದುಡಿವವರ |
ಅಪ್ಪ ಖಾಸಗತ ಶಿವನೆ ತಪ್ಪಮನ್ನಿಸು ಪ್ರಭುವೆ
ಒಪ್ಪಿಸಿಕೊಳ್ಳೊ ಪಾದಕ್ಕ | ಶ್ರೀಗುರುವೆ
ತಪ್ಪದೆ ಬರುವೆ ನಿನ ಮಠಕೆ |
ಅಲ್ಲಿರುವೆ ಇಲ್ಲಿರುವೆ ಎಲ್ಲೆಲ್ಲು ನೀನಿರುವೆ
ಹುಲ್ಲಿನ ಚಿಗುರ ತುದಿಮ್ಯಾಗ | ಮುಲುಕಾಡಿ
ಕಲ್ಲೊಳಗು ಅಡಗಿ ಕುಳಿತಿವೆ |
ಅಳ್ಳಿಯ ಮರದಾಗ ಕಳ್ಳಿಯ ಕಂಟ್ಯಾಗ
ಎಳ್ಳು ಹೂವಿನ ಎಸಳಾಗ | ಖಾಸಗತ
ಹೊಳ್ಳೊಳ್ಳಿ ನೋಡಿ ನಗತಾನೊ |
ಚಂಡು ಹೂಹೂವಿನ ತೊಂಡತೊಂಡಲದಾಗ
ದುಂಡು ಮಲ್ಲಿಗೆ ಮುಗುಳಾಗ | ಹುದುಗಿದ
ಬಂಡನು ಉಣಿಸುವನೊ ಖಾಸಗತ
ಮುತ್ತೈದೆ ಮಗಳಾಗಿ ಮುತ್ತಿನಾರತಿ ಹಿಡಿದು
ಹೊತ್ತೇರು ಮುಂಚೆ ಬರುವೇನೊ | ಖಾಸಗತ
ತೊತ್ತಾಗಿಸಿಕೊಳ್ಳೊ ನನ ಮನಸ |
ರಟ್ಟಿಯು ಬಲಿಲಾರದ ನೆಟ್ಟಗೆ ಬೆಳಿಲಾರದ
ಹೊಟ್ಟಿ ತಿಪ್ಪಲಕ ದುಡಿವಂತ | ಮಕ್ಕಳನ
ಒಟ್ಟಾಗಿ ಸಲಹೊ ಖಾಸಗತ |
ಕೋಳಿಯ ಕೂಗನ್ನು ಕೇಳುತ ಮೇಲೆದ್ದು
ಏಳೇಳು ಬಾರಿ ನೆನೆಯುವೆನೊ | ಖಾಸಗತ
ಕಾಳಕತ್ತಲೆಯ ಹೊರದೂಡೊ |
ಖ್ಯಾತಿಯಲಿ ಖಾಸಗತ ಜ್ಯೋತಿಯಲಿ ಖಾಸಗತ
ಸೋತು ಸೊರಗಿದ ಕಾಲಕ್ಕ | ಕೈಹಿಡಿದು
ಮಾತು ನಡೆಸೀದೊ ಮಾದೇವ |
ಅಕ್ಕರದ ಮಾತಿನ್ಯಾಗ ಸಕ್ಕರೆಯ ನುಡಿಯಾಗ
ನಕ್ಕವರನಗೆಯ ಬೆಳಕಾಗ | ಖಾಸಗತ
ಹೊಕ್ಕಾಡೊ ಬಗೆಯು ಬೆಡಗಾಯ್ತು |
ಆಸತ್ರೂ ನೀನಿರುವೆ ಬ್ಯಾಸತ್ರೂ ನೀನಿರುವೆ
ತ್ರಾಸಿನಲಿ ಸಿಕ್ಕು ಹೊರಳಾಗೊ | ಖಾಸಗತ
ಲೇಸಾದ ಅರಿವು ನೀಡ್ಯಾನೊ |
ಮುಂಜಾನೆ ನೆನೆದರ ಅಂಜಿಕೆ ಹರಿವೂದು
ಸಂಜೀಕೆ ಧ್ಯಾನ ಮಾಡಿದರ | ಬದುಕಿನ
ನಂಜೆಲ್ಲ ಕರಗಿ ಹೋಗುವುದೊ |
ಹೂವಿನ ಬಕುತಿಗೆ ನೋವೆಲ್ಲ ದೂರಾಯಿತೊ
ಹಾವಿನ ನಂಜು ಹರಿದೋಯಿತೊ | ಖಾಸಗತ
ಸಾವಿನಂಜಿಕೆ ದೂರಾಯಿತೊ |
ಬೇವಿನ ಹಣ್ಣೀಗೂ ಮಾವಿನ ಪರಿಮಳ
ದೇವ ನಿನ್ನೆಸರು ನೆನೆದರ | ಖಾಸಗತ
ಸಾವಿಗೆ ಸದರ ಕಟ್ಟತೈತೊ |
No comments:
Post a Comment