Monday, September 23, 2013

ಖಾಸಗತ ನಿನನಾಮ ಏಸೊತ್ತ ನೆನೆಯಲಿ



ಲೇಸಾದ ಅರಿವು ನೀಡೆಮಗೆ

ಖಾಸಗತ ನಿನನಾಮ ಏಸೊತ್ತ ನೆನೆಯಲಿ
ಸಾಸವತ ನನ್ನ ನಾಲ್ಗ್ಯಾಗ | ನೆಲದೈತಿ
ವಿಸ್ವಾಸ್ದಿ ಕಾಯೊ ಅಭಿಮಾನ |

ಮನೆಯಾಗ ನೆಲಸೀದಿ ಮನದಾಗ ಸುಳಿತೀದಿ
ಗುಣದಾಗ ರೂಪ ತಾಳತೀದಿ | ಅನುಭಾವ್ದ
ಕಣದಾಗ  ರಾಶಿ ಮಾಡತೀದಿ |

ಹೆಸರಾಯ್ತು ಖಾಸಗತ ಉಸಿರಾಯ್ತು ಸಾಸವತ
ಖುಷಿಯಾಯ್ತು ಜಗವು ನಿನ್ನಿಂದ | ತಿಪ್ಪಲಕೆ
ಬಿಸಿಯಾದ ಮನ್ಸು ತಂಪಾಯ್ತು |
ಕೆಸರಾದ ಮನ್ಸು ತಿಳಿಯಾಯ್ತು |

ಹೆಚ್ಚೇನು ಹೇಳಲಿ ನೆಚ್ಚೀನಿ ನಿನಪಾದ
ಹುಚ್ಚನ್ನು ಬಿಡಿಸಿ ಕಾಪಾಡು | ಬದುಕಲ್ಲಿ
ಕೆಚ್ಚನ್ನು ತುಂಬಿ ಹೋರಾಡ್ಸು |

ಗುಟ್ಟೀನ ಮಾತಿದು ನೆಟ್ಟಗ ಹೇಳತೀನಿ
ಗಟ್ಯಾಗಿ ನೆಲಸು ಮನದಾಗ | ಖಾಸಗತ
ಪಟ್ಟಾಗಿ ಕಾಯ್ದು ಕರುಣಿಸೊ |

ಕಲ್ಲು ಕಲ್ಲಿನ ಮ್ಯಾಲ ಹುಲ್ಲು ಹುಲ್ಲಿನ ಮ್ಯಾಲ
ಚಲ್ಲುವರದೈತಿ ನಿನ್ನೆಸರು | ಹಬ್ಬುತ್ತ
ಸೊಲ್ಲಾಯ್ತು ಜಗದ ಒಡಲೊಳಗ |

ತಳಕೋಟಿ ಊರಿದು ಕಳಕೋತು ಕಪ್ಪಕಲೆ
ಬೆಳಕೋತ ಬಂತು ನಿನ್ನಿಂದ | ಖಾಸಗತ
ಬೆಳಕಾಯ್ತು ನಮ್ಮ ನಾಡಿಗೆ |

ಅನ್ನ ಕೊಟ್ಟವ ನೀನು ಚಿನ್ನಕೊಟ್ಟವ ನೀನು
ಬೆನ್ ಬಿದ್ದ ನನ್ನ ಕಾಪಾಡಿ | ಖಾಸಗತ
ಬಣ್ಣ ಕೊಟ್ಟೀದಿ ಮರಿಲೆಂಗೊ |

ಶಂಭುಹರ ನೀನೆಂದು ನಂಬಿಹುದು ನಾಡೆಲ್ಲ
ಸಾಂಬಶಿವನಾಗಿ ಕಾಪಾಡೊ | ಖಾಸಗತ
ಹುಂಬರ ಮ್ಯಾಳ ಮರಿಲಾರ್ದ |

ಆಟವ ಆಡ್ಸೀದಿ ಕೂಟವ ಕೂಡ್ಸೀದಿ
ನಾಟಕವಾಡಿ  ನಲಿಸೀದಿ | ಖಾಸಗತ
ಮಾಟದ ಬದುಕು ತೋರ್ಸೀದಿ |

ಬಕುತಿಯ ಬೆಳಸೀದಿ ಯುಕುತಿಯ ಕಲಿಸೀದಿ
ಬಕುತ ಮಾರ್ಕಂಡ ಆಟವ | ರಚಿಸೀದಿ
ಮುಕ್ತಿಯ ದಾರಿ ತೋರ್ಸೀದಿ |

ಜ್ಯೋತಿಯಲಿ ಖಾಸಗತ ಖ್ಯಾತಿಯಲಿ ಖಾಸಗತ
ಸೋತುಸೊರಗಿದ ಕಾಲಕ್ಕ | ಕೈಹಿಡದು
ಮಾತನ್ನುಳಿಸೀದಿ ಮಾದೇವ |

ಅಕ್ಕರದ ಮಾತಲ್ಲಿ ಸಕ್ಕರೆಯ ನಡೆಯಲ್ಲಿ
ನಕ್ಕವರ ನಗೆಯ ಬೆಳಕಲ್ಲಿ | ಖಾಸಗತ
ಹೊಕ್ಕಿರುವ ಬಗೆಯು ಬೆಡಗಾಯ್ತು |

ಮೊದಲೀಗೆ ಕೈಮುಗಿದು ತೊದಲೀನ ನುಡಿಗಳನು
ಹದಮಾಡಿ ಬಿತ್ತಿ ಬೆಳೆದಿರುವೆ | ನಾಲಿಗ್ಯಾಗ
ಸದರೀಲೆ ಕಾಯೊ ಖಾಸಗತ |

ಆಸತ್ರು ನೀನಿರುವೆ ಬ್ಯಾಸತ್ರು ನೀನಿರುವೆ
ತ್ರಾಸಿನಲಿ ಸಿಕ್ಕು  ನರಳ್ವಾಗ | ಖಾಸಗತ
ಲೇಸಾದ ಅರಿವು ನೀಡೆಮಗೆ |

ಚಣಹೊತ್ತು ನೆನದರ ಅಣುಮಾತ್ರ ಪಾಪಿಲ್ಲ
ಅನುದಿನ ನೆನೆದು ಪಾರಾಗೊ | ಸೂತರವ
ಮನದಾಗ ತುಂಬೊ ಖಾಸಗತ |

ಮುಂಜಾನೆ ನೆನೆದರ ಅಂಜಿಕೆ ಹರಿವೂದು
ಸಂಜೀಕ ಧ್ಯಾನ ಮಾಡಿದರ | ಬದುಕಿನ
ನಂಜೀನ ಪದರು ಹರಿವೂದು |

ಹೂವಿನ ಬಕುತಿಗೆ ನೋವೆಲ್ಲ ದೂರಾಯ್ತು
ಹಾವಿನ ನಂಜು ಬಯಲಾಯ್ತು | ಖಾಸಗತ
ಸಾವಿನ ನಂಟು ತಪ್ಪೊಯ್ತು |

ಅರಿಯುವ ತಿಳಿವನ್ನ ಮರೆಯುವ ಮಾತನ್ನ
ಪಿರುತಿಂದ ಉಣಿಸೊ ಅನುದಿನ | ಖಾಸಗತ
ಹರನಾಮ ಉಂಡು ಬೆಳೆವೇನೊ |

ಬೇವಿನ ಹಣ್ಣೀಗೂ ಮಾವಿನ ಪರಿಮಳ
ಹ್ಯಾವಿಗೆ ಬಿದ್ದು ನೆನೆದರ | ನಿನನಾಮ
ಸಾವಿಗೆ ಸದರ ಕಟತೈತಿ |

ಅರಿವಿನ ಖಾಸಗತ ಗುರುವಿನ ನೆನಿಬೇಕೊ
ಮರೆಯದ ಮಾತ ತಿಳಕೊರೊ | ಪದರಾಗ
ಬಿರಿಯಾಗಿ ಕಟ್ಟಿ ನಡಿಬೇಕೊ |
       *****
೨೪-೦೯-೨೦೧೩
 

No comments:

Post a Comment